ಆಶಾ ನೇಗೀ ಯವರು ಭಾರತೀಯ ದೂರದರ್ಶನ ನಟಿ. ಅವರು 'ಪವಿತ್ರ ರಿಷ್ತಾ' ಧಾರವಾಹಿಯಲ್ಲಿ ಪೂರ್ವಿ, 'ಏಕ್ ಮುಟ್ಟಿ ಆಸ್ಮಾನ್' ನಲ್ಲಿ ಕಲ್ಪನಾ, 'ಕುಚ್ ತೊ ಹೇ ತೇರೆ ಮೇರೆ ದರ್ಮಿಯಾ' ನಲ್ಲಿ ಕೋಯಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಆಶಾರವರು ೨೦೧೪ ರಲ್ಲಿ ತನ್ನ ಸಂಗಾತಿಯಾದ ರಿತ್ವಿಕ್ ಧನ್ಜನಿಯೊಂದಿಗೆ ಭಾರತೀಯ ನೃತ್ಯ ರಿಯಾಲಿಟಿ ಶೋ 'ನಚ್ ಬಲಿಯೇ-೬' ರನ್ನು ಗೆದ್ದಿದ್ದಾರೆ. == ಆರಂಭಿಕ ಜೀವನ == ಆಶಾ ನೇಗೀ ಯವರು ಆಗಸ್ಟ್ ೨೩, ೧೯೮೯ ರಲ್ಲಿ ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ಜನಿಸಿದರು. ೨೦೦೯ ರಲ್ಲಿ ಅವರು ಮಿಸ್ ಉತ್ತರಾಖಂಡ್ ಕಿರೀಟವನ್ನು ಮುಡಿಗೇರಿಸಿಕೊಂಡರು. == ವೃತ್ತಿ ಜೀವನ == ೨೦೦೯ ರಲ್ಲಿ ತಮ್ಮ ಕಾಲೇಜು ದಿನಗಳಲ್ಲಿ ಮಿಸ್ ಉತ್ತರಾಖಂಡ್ ಬಿರುದನ್ನು ಪಡೆದ ನಂತರ ನೇಗೀಯವರು ತಮ್ಮ ವೃತ್ತಿ ಜೀವನವನ್ನು ರೂಪದರ್ಶಿಯಾಗಿ ಆರಂಭಿಸಿದರು. ಅವರು ವಿವಿಧ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು ಮತ್ತು ಅನೇಕ ಫೋಟೋ ಶೂಟ್ಗಳನ್ನು ಮಾಡಿದರು. ನಂತರ ಅವರು ೨೦೧೦ ರಲ್ಲಿ ಸ್ಟಾರ್ ಪ್ಲಸ್ ನ ಜನಪ್ರಿಯ ಶೋ 'ಸಪ್ನೋನ್ ಸೆ ಬರೇ ನೈನಾ' ದಲ್ಲಿ ಮಧುರಾ ಎಂಬ ಪಾತ್ರದಲ್ಲಿ ಅಭಿನಯಿಸಿದರು. ೨೦೧೧ ರಲ್ಲಿ ಆಶಾರವರು ಏಕ್ತಾ ಕಪೂರ್ ರವರ ಜನಪ್ರಿಯ ಮೆಗಾ ಶೋ 'ಬಡೇ ಅಚ್ಛೆ ಲಗ್ತೇ ಹೇಂ' ನಲ್ಲಿ ಪ್ರಮುಖ ಪಾತ್ರಧಾರರಾದ ರಾಮ್ ಕಪೂರ್ ರವರ ಸಹೋದರಿ ಯಾಗಿ ಅಭಿನಯಿಸಿದರು. ಈ ಶೋ ಅವರಿಗೆ ಒಂದು ಉತ್ತಮವಾದ ಅನುಭವವನ್ನು ತಂದುಕೊಟ್ಟಿದೆ ಮತ್ತು ಅದರಲ್ಲಿ ಪ್ರಮುಖ ಪಾತ್ರಧಾರಿಯಾದ ಸಾಕ್ಷಿ ತನ್ವರ್ ರವರನ್ನು ತಮ್ಮ ಸ್ಪೂರ್ತಿಯನ್ನಾಗಿ ಪರಿಗಣಿಸಿದ್ದಾರೆ. ೨೦೧೧ ರಲ್ಲಿ ಝೀ ಟಿವಿಯ ಪವಿತ್ರ ರಿಷ್ತಾ ದಲ್ಲಿ ಬುದ್ಧಿವಂತಿಕೆಯ, ಸುಂದರವಾದ ಮತ್ತು ನಿರ್ಣಾಯಕ ಹುಡುಗಿಯಾಗಿ, ಅರ್ಚನಾ ದೇಶ್ಮುಖ್ ಮಗಳಾದ ಪೂರ್ವಿ ದೇಶ್ಮುಖ್ ಎಂಬ ಪಾತ್ರವನ್ನು ವಹಿಸಿಕೊಂಡರು. ತೆರೆಯಲ್ಲಿ ಅವರ ಮತ್ತು ರಿತ್ವಿಕ್ ಧನ್ಜನಿಯವರ ಜೋಡಿಯನ್ನು ಅನೇಕ ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ರಿತ್ವಿಕ್ ಜೊತೆಯಲ್ಲಿ ಝೀ ರಿಷ್ತೇ ಅವಾರ್ಡ್ಸ್ ನಲ್ಲಿ ಜನಪ್ರಿಯ ನೆಚ್ಚಿನ ಜೋಡಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಅದಲ್ಲದೇ ಆಶಾರವರು ಫ್ರೆಶ್ ಫೇಸ್ ಫೀಮೇಲ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ನವೆಂಬರ್ ೨೦೧೩ ರಲ್ಲಿ, ಆಶಾ ನೇಗಿಯವರು ಜನಪ್ರಿಯ ಡಾನ್ಸ್ ರಿಯಾಲಿಟಿ ಶೋ ನಚ್ ಬಲಿಯೇ-೬ ರಲ್ಲಿ ತಮ್ಮ ಸಂಗಾತಿಯಾದ ರಿತ್ವಿಕ್ ಧನ್ಜನಿಯೊಂದಿಗೆ ಭಾಗವಹಿಸಿದರು. ಇಬ್ಬರೂ ಮನರಂಜನೆಯ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಫೆಬ್ರವರಿ ೨೦೧೪ ರಲ್ಲಿ, ಇಬ್ಬರೂ ನಚ್ ಬಲಿಯೇ-೬ ರ ವಿಜೇತರಾದರು.೨೦೧೫ ರಲ್ಲಿ ಆಶಾರವರು 'ಖತ್ರೋನ್ ಕೇ ಕಿಲಾಡಿ' ಶೋ ನಲ್ಲಿ ಭಾಗವಹಿಸಿ ಅಂತಿಮ ಸ್ಪರ್ಧಿಗಳಲ್ಲಿ ಒಬ್ಬರಾದರು. ಅವರು ಬಾಕ್ಸ್ ಕ್ರಿಕೆಟ್ ಲೀಗ್ ಸೀಸನ್ ೧ ರ ತಂಡದ ಸದಸ್ಯೆಯಾಗಿದ್ದರು. == ದೂರದರ್ಶನ == == ಉಲ್ಲೇಖಗಳು ==